Tuesday, March 8, 2011

ಕಪಿಚೇಷ್ಟೆ


ತಲೆತಗ್ಗಿಸಿ ಉರುಹೊಡೆದು,
ಊರು ಬಿಟ್ಟು ನಗರ ಸೇರಿ,
ಅಲ್ಲೇ ಗೂಡು ಕಟ್ಟಿ ಗುಂಡು ಹಾಕುವ ನಮಗೆ
ಇದೊಂದು ಬಿಡಿಸಲಾರದ ಒಗಟು!
"ಖಾದಿ-ಖಾಕಿ-ಖಾವಿಯ ದರ್ಬಾರಿನಲಿ,
ಎಲ್ಲಿಂದ ಬಂತು ಈ ಒಂಟಿ ಕೋತಿ?
ಏನು ಧೈರ್ಯ? ಎಂಥ ಕಥೆ?"
ಮಾತು ಮಾತಿಗೂ ದಂತಕಥೆ
ಬಾಲಕ್ಕೆ ಬೆಂಕಿಯಿಟ್ಟರೆ ಊರೆಲ್ಲ ಸುಟ್ಟು ಕರಕುವ,
ಸಾಯಲೆಂದು ಸುಮ್ಮನಿದ್ದರೆ ಬಾಲದಿಂದ ಕೋಟೆ ಕಟ್ಟುವ
ಈ ಕೋತಿಯನ್ನು ಇಲ್ಲಿ ಬಿಟ್ಟವರಾರು?

ರಟ್ಟೆ ಹಿಡಿದಾಕ್ಷಣ ಮಾಯವಾಗುವ ಸಿಟ್ಟು,
ಕಿವಿಯಿಂದ ಕಿವಿಗೆ ಅರಳುವ ಮುಗುಳ್ನಗೆಯ ನೆರಳಲಿ ನಿಂತು
ಯಾರಿಲ್ಲದಾಗ ಸಿಡಿಯುವದು ಗುಟ್ಟಲ್ಲ:
ಬೆನ್ನಟ್ಟಿ ಬರುವ ಮೆಟ್ಟಿನ ಶಬ್ದಕ್ಕೆ,
ಗೋಡೆಯೊಳಗೇ ಅವಿತು ಆಲಿಸುವ ಕಿವಿಗಳಿಗೆ,
ಚಿತ್ತದೊಳಗೇ ಕೂತು  ಹೆದರಿಸುವ ಅಪ್ಪನಿಗೆ,
ಸುತ್ತ ಸುತ್ತುತಲಿರುವ ಮರಿಮಗನ ಕನಸುಗಳಿಗೆ
ಹೆದರಿ ಬದುಕುವ ನಾವೂ ಆಗಾಗ ಗೊಣಗುವುದುಂಟು
"ಬೇಕಿತ್ತೇ ಅವಗೆ ಜಾನಕಿಯ ಸಂಗ?"

ಇರಲಿ ಬಿಡಿ,
"ಮಾಡಿದವರ ಪಾಪ ಆಡಿದವರ ಮೇಲಂತೆ,"
ಎಂದೋ ಬರುವ ರಾಮನಿಗಿಂತ,
ಇಂದಿನ ಆರಾಮ ಮುಖ್ಯ.
ಲಕ್ಷ್ಮಿ ಪಟಾಕಿಯನ್ನೇ ಕಿವಿಗೆರಡು ಬೆರಳಿಟ್ಟು ಸಿಡಿಸುವ,
ಕುಂಬಳಕಾಯಿ ಕಡಿದು ತಿಲಕ ಧರಿಸುವ ನಮಗೆ,
ಕಪಿಚೇಷ್ಟೆ ಸಾಧುವಲ್ಲ
(ಒಳಗೆ ಕುಳಿತು ಕುಣಿದು ಕುಪ್ಪಳಿಸುವ ಕೋತಿಗೆ
ಇದು ಅರ್ಥವಾಗುವುದಿಲ್ಲ!)
ಒಮ್ಮೆ ಬರಲಿ ಬಿಡಿ ರಾಮ
ಚಪ್ಪಾಳೆ ತಟ್ಟಿ, ಮೇಜು ಕುಟ್ಟಿ,
ಕೆನ್ನೆ ತಟ್ಟಿಕೊಂಡರೆ ಮತ್ತದೇ ಆರಾಮ,
ಅಲ್ಲಿಯವರೆಗೂ ಅಲ್ಲಿಂದಿಲ್ಲಿಗೆ ಜಿಗಿಯುವ
ಈ ಕೋತಿಗೆ ಇರಬಾರದೇ ವಿರಾಮ?

No comments:

Post a Comment