ಬೋಧಿವೃಕ್ಷದ ಬಾವಲಿಗಳಿಗೆ ಹೇಸಿ, ನಾಚಿ,
ಶತಮಾನಗಳಿಂದ ಅವಿತುಕೊಂಡಿದ್ದ ಬುದ್ಧ,
ಏಕಾಏಕಿ ನಕ್ಕನೆ? ಇಲ್ಲಾ ಬೆಚ್ಚಿ ಬಿದ್ದನೆ?
ಇಲ್ಲ, ಇಲ್ಲ....
ಬುದ್ಧ ನಕ್ಕೇ ಇಲ್ಲ, ನಗಲು ಸಿಕ್ಕೇ ಇಲ್ಲ!!
ಒಂದು ಶವಕ್ಕೇ ಹೆದರಿ ಹೈರಾಣಾದ ಬುದ್ಧ,
ಒಂದೇ ರೋಗಿಯ ಕಂಡು ಕಂಗಾಲಾಗಿದ್ದ!
ಒಂದು ಮುದುಕಿಯ ಕಂಡೇ ಮನ ಮುದುರಿಕೊಂಡಿದ್ದ...
ಅವ ನಕ್ಕಿದ್ದೇಕೆ?
ನಗಲು ಅವನೇ ಬೇಕಿತ್ತೆ?
ಏನನು ನೆನೆದು ನಕ್ಕ? ಯಾರನು ನೋಡಿ ನಕ್ಕ?
ಛೆ! ಅವನು ನಕ್ಕೇ ಇಲ್ಲ.
ನಕ್ಕರೆ ಅತ್ತೀತು ಭೂಮಿ!
ನಾಚಿ ತಲೆಕೆಳಗಾದೀತು ಭೋಧೀವೃಕ್ಷ!!
ಅಣುಸ್ಫೋಟದ ಕಚಗುಳಿಗೂ
ಅವಗೆ ನಗೆ ಬರಲಿಕ್ಕಿಲ್ಲ!!
ಕಡುಕಪ್ಪು ನಿಟ್ಟುಸಿರು, ಕಣ್ಣೀರ ಕಾರ್ಮೋಡ
ಮನದಿಗಿಲು, ತೊಡೆನಡುಕ
ನಗುವ ಲಕ್ಷಣಗಳೇನು?
ಛೆ! ಇದು ದಾರ್ಷ್ಟ್ಯ, ಅನ್ಯಾಯ,
ನಕ್ಕವರಾರೋ? ಅತ್ತವರೆಷ್ಟೋ?
ಯಾರ ಹೆಸರೋ? ಯಾರ ಬಸಿರೋ?
ಬುದ್ಧ ನಕ್ಕೇ ಇಲ್ಲ!
ನಕ್ಕರೆ ಬುದ್ಧನೇ ಅಲ್ಲ!!
ಭಾರತದ ಮೊದಲ ಪರೀಕ್ಷಾರ್ಥ ಅಣು ಸ್ಫೋಟದ ಸಾಂಕೇತಿಕ ಹೆಸರು : ನಗುವ ಬುದ್ಧ ("Smiling Buddha")
No comments:
Post a Comment