Sunday, May 20, 2012

ಬರೆಯದ ಕವನ..


 ಕನಸ ಬಿತ್ತಿ ಮರೆಯಾದ ಪ್ರೀತಿ
ನೀನೊಂದು ಬರೆಯದ ಕವನ
ನನ್ನ ಮರೆತರೂ ಮರೆಯಲಾರೆ ನಾ,
... ನಿನ್ನ ಸ್ಪೂರ್ತಿಯ ಸ್ಮರಣ

ದಿನವೂ ಗುನುಗುನಿಸಿ, ಮತ್ತೆ ಕನವರಿಸಿ
ಕನಸ ಕಂಡೆ ನಾ ಅನುದಿನಾ
ಕನಸ ಮೂಡಿಸಲು ಶಬ್ದ ಸಿಗದಿರಲು
ಮನಸೇ ಕೊಟ್ಟೆ ನಾ ಕ್ಷಣಕ್ಷಣ

ಮನವು ಮುಳುಗಿರಲು ಇರವ ಮರೆತಿರಲು
ದನಿಗೊಡದೆ ಬಂದ ಓ ಚೇತನಾ
ನೀನು ಎದುರಿರಲು ಮಾತು ಸರಿಬರದು
ಬರೆಯಲೆಂತು ನಾ ಕವನ?

Thursday, May 5, 2011

ಸಲಹೆ

ಕಾಮನಬಿಲ್ಲನು ಕಾಣದ ಕಣ್ಣಿಗೆ
ಕಾಣುವುದೊಂದೆ ಬಣ್ಣ
ಬಿಳಿಯೊಳು ಅಡಗಿದೆ ವರ್ಣ ಅನಂತವು
ನಂಬುವೆಯಾ ನೀ ನನ್ನ?
ಕಣ್ಣು ಕಂಡರೂ ಏನೂ ಕಾಣದು,
ಜೀವಕಂಟಿದ ಯಂತ್ರ
ಹುಡುಕದೇ ನೀನು, ಕಾಣುವುದೇನು?
ಅರಸಲು ಅರಸು ಸ್ವತಂತ್ರ

ತಿನ್ನದ ಮಾವಿನ ಹಣ್ಣಿನ ರುಚಿಯ
ಓದಿ ತಿಳಿದಾನೆ ಜಾಣ?
ಹುಳಿಯೊಂದಿಷ್ಟು, ಸಿಹಿಯೊಂದಿಷ್ಟು,
ತಲೆಬುಡವರಿಯದ ಜ್ಞಾನ  
ಯಾರದೋ ಮಾತು, ಅರಿವಿಗೆ ದಕ್ಕದು.
ತೇಲಿಬರುವ ದನಿ ಕ್ಷೀಣ
ಎವೆಯಿಕ್ಕದ ಮನ ಹೊರಓಡದ ದಿನ,
ಮನತುಂಬುವುದೀ ಗಾನ

ತರ್ಕ-ವಿತರ್ಕದ ಆಚೆ-ಈಚೆಯಲಿ
ಬರೆದಿಹ ಚಿತ್ರ ವಿಚಿತ್ರ
ಕಾಲೂ ಕಾಣದು, ತಲೆಯೂ ತೋರದು,
ಅರ್ಥವಾಗದೀ ಸೂತ್ರ
ಅರ್ಥದ ಸ್ವಾರ್ಥದ ಮಾತಂತಿರಲಿ
ಇದು ಪರಮಾರ್ಥದ ಚಿತ್ರ
ಬರೆದವನಾರೋ? ಅಳಿಸುವ ಮುನ್ನ
ಮನತುಂಬಿಸಿಕೋ ಮಿತ್ರ

Tuesday, March 8, 2011

ಚಿನ್ನದ ಜಿಂಕೆ


ದಶಶಿರನ ಹೆಗಲೇರಿ
ಬಂದ ಮಾಯಾಜಿಂಕೆ
ಸೀತೆಯನು ಸೆಳೆದೊಯ್ದ ಪರಿಬಲ್ಲೆಯಾ ನೀನು?
ಹೊಳೆವುದೆಲ್ಲ ಚಿನ್ನವಲ್ಲ.
ಯಾರಿಗೂ ಹೊಸತಲ್ಲ
ಜೀವಂತ ಜಿಂಕೆಯದು, ಆದರೂ ಶಂಕೆ
"ನನ್ನ ಚಿನ್ನದ ಜಿಂಕೆ!
ಹಿಡಿದು ತಾ! ತಾ ಇನಿಯ!!"
ಅರಮನೆಯ ತೊರೆದರೂ ಜಿಗಿವ ಜಿಂಕೆಯ ಆಸೆ?
"ಮೋಹದಾಣತಿ
ಶ್ರೀರಾಮನಿಗೂ ಮಿಗಿಲೆ?"
ಕವಿಕಂಡ ಇತಿಹಾಸ, ಇರಬಾರದೇಕೆ?

"ದ್ಯೂತ ರಾಯರ ಧರ್ಮ,
ಇಡು ನಿನ್ನ ಮಾನಿನಿಯ?"
ತಮ್ಮನಾಣತಿಯೊಡನೆ ಮತ್ತೆ ಬಂದಿತು ಜಿಂಕೆ
ಇದ್ದ ಕಣ್ಗಳ ಮುಚ್ಚಿ,
ತೆರೆದ ಕಿವಿಗಳನವುಚಿ
ಮತ್ತೆ ಓಡಲೇಬೇಕೆ, ಹೊಳೆವ ಜಿಂಕೆಯ ಹಿಂದೆ?
"ಇದು ನನ್ನ ಸ್ವತ್ತು,
ನಾನವನ ತೊತ್ತು"
ಹಳೆ ಚಾಳಿ, ಹೊಸ ಮಾತು, ಅನುಕೂಲ ಸಿಂಢು!
"ಕೊಳಲೂದಿದ ಮೋಹನಗೂ
ಪಾಂಚಜನ್ಯದ ಉರುಳು"
ಕವಿಕಂಡ ಇತಿಹಾಸ ಮತ್ತೆ ಬಂದೀತೇಕೆ?

ಹೊಳೆವುದೆಲ್ಲವ ಕಂಡು,
ನೆಗೆವ ಕಪಿಗಳ ಹಿಂಡು
ದುಂಡುಮೇಜಿನ ಸುತ್ತ ಮತ್ತೆ ಜಿಂಕೆಯ ದಂಡು,
ದಿನಕೊಂದು ಹೊಸ ಚರ್ಮ,
ಹೊಸ ಕೋಡು, ಹೊಸ ವೇಗ,
ಬಾಣತಾಗುವ ಮುನ್ನ ಮಾಯವಾಗುವ ಯೋಗ!
ರಾಮನಿಗೋ, ಧರ್ಮನಿಗೋ
ಎಲ್ಲ ಮರೆಯುವ ರೋಗ
ಯುಗಕೊಂದು ಹೊಸ ಹೆಸರು: ಮರೆಯಾಗದೀ ಮೋಹ
"ಅರಿವು ಮೂಡುವ ಮುನ್ನ,
ಹೊಳೆವುದೆಲ್ಲವೂ ಚಿನ್ನ!"
ಕವಿಕಂಡ ಇತಿಹಾಸ ಮತ್ತೆ ಬರದು ಯಾಕೆ!

ತೊತ್ತು - ಆಳು - ತೊತ್ತಿನ ಮಗನಿಗೆ ಇಷ್ಟು ಕೊಬ್ಬೇ?
ಉರುಳು - ನೇಣು - ಉರುಳು ಹಾಕಿಕೊಂಡು ಸತ್ತ
ಆಣತಿ - ಅಪ್ಪಣೆ -  permission

ಕಪಿಚೇಷ್ಟೆ


ತಲೆತಗ್ಗಿಸಿ ಉರುಹೊಡೆದು,
ಊರು ಬಿಟ್ಟು ನಗರ ಸೇರಿ,
ಅಲ್ಲೇ ಗೂಡು ಕಟ್ಟಿ ಗುಂಡು ಹಾಕುವ ನಮಗೆ
ಇದೊಂದು ಬಿಡಿಸಲಾರದ ಒಗಟು!
"ಖಾದಿ-ಖಾಕಿ-ಖಾವಿಯ ದರ್ಬಾರಿನಲಿ,
ಎಲ್ಲಿಂದ ಬಂತು ಈ ಒಂಟಿ ಕೋತಿ?
ಏನು ಧೈರ್ಯ? ಎಂಥ ಕಥೆ?"
ಮಾತು ಮಾತಿಗೂ ದಂತಕಥೆ
ಬಾಲಕ್ಕೆ ಬೆಂಕಿಯಿಟ್ಟರೆ ಊರೆಲ್ಲ ಸುಟ್ಟು ಕರಕುವ,
ಸಾಯಲೆಂದು ಸುಮ್ಮನಿದ್ದರೆ ಬಾಲದಿಂದ ಕೋಟೆ ಕಟ್ಟುವ
ಈ ಕೋತಿಯನ್ನು ಇಲ್ಲಿ ಬಿಟ್ಟವರಾರು?

ರಟ್ಟೆ ಹಿಡಿದಾಕ್ಷಣ ಮಾಯವಾಗುವ ಸಿಟ್ಟು,
ಕಿವಿಯಿಂದ ಕಿವಿಗೆ ಅರಳುವ ಮುಗುಳ್ನಗೆಯ ನೆರಳಲಿ ನಿಂತು
ಯಾರಿಲ್ಲದಾಗ ಸಿಡಿಯುವದು ಗುಟ್ಟಲ್ಲ:
ಬೆನ್ನಟ್ಟಿ ಬರುವ ಮೆಟ್ಟಿನ ಶಬ್ದಕ್ಕೆ,
ಗೋಡೆಯೊಳಗೇ ಅವಿತು ಆಲಿಸುವ ಕಿವಿಗಳಿಗೆ,
ಚಿತ್ತದೊಳಗೇ ಕೂತು  ಹೆದರಿಸುವ ಅಪ್ಪನಿಗೆ,
ಸುತ್ತ ಸುತ್ತುತಲಿರುವ ಮರಿಮಗನ ಕನಸುಗಳಿಗೆ
ಹೆದರಿ ಬದುಕುವ ನಾವೂ ಆಗಾಗ ಗೊಣಗುವುದುಂಟು
"ಬೇಕಿತ್ತೇ ಅವಗೆ ಜಾನಕಿಯ ಸಂಗ?"

ಇರಲಿ ಬಿಡಿ,
"ಮಾಡಿದವರ ಪಾಪ ಆಡಿದವರ ಮೇಲಂತೆ,"
ಎಂದೋ ಬರುವ ರಾಮನಿಗಿಂತ,
ಇಂದಿನ ಆರಾಮ ಮುಖ್ಯ.
ಲಕ್ಷ್ಮಿ ಪಟಾಕಿಯನ್ನೇ ಕಿವಿಗೆರಡು ಬೆರಳಿಟ್ಟು ಸಿಡಿಸುವ,
ಕುಂಬಳಕಾಯಿ ಕಡಿದು ತಿಲಕ ಧರಿಸುವ ನಮಗೆ,
ಕಪಿಚೇಷ್ಟೆ ಸಾಧುವಲ್ಲ
(ಒಳಗೆ ಕುಳಿತು ಕುಣಿದು ಕುಪ್ಪಳಿಸುವ ಕೋತಿಗೆ
ಇದು ಅರ್ಥವಾಗುವುದಿಲ್ಲ!)
ಒಮ್ಮೆ ಬರಲಿ ಬಿಡಿ ರಾಮ
ಚಪ್ಪಾಳೆ ತಟ್ಟಿ, ಮೇಜು ಕುಟ್ಟಿ,
ಕೆನ್ನೆ ತಟ್ಟಿಕೊಂಡರೆ ಮತ್ತದೇ ಆರಾಮ,
ಅಲ್ಲಿಯವರೆಗೂ ಅಲ್ಲಿಂದಿಲ್ಲಿಗೆ ಜಿಗಿಯುವ
ಈ ಕೋತಿಗೆ ಇರಬಾರದೇ ವಿರಾಮ?

Friday, December 31, 2010

ತಿಗಣೆಗಳ ಪರಿಷೆ

ತಿಗಣೆಗಳ ಪರಿಷೆ

ಕಲ್ಲಕೆತ್ತಿ, ಭಿತ್ತಿ ಬರೆಸಿ
ಮೆಲ್ಲನೆ ಅಮರನಾಗುವ ಹುಚ್ಚು
ಇಂದು-ನಿನ್ನೆಯದಲ್ಲ, ನಾಳೆ ಮುಗಿಯುವದಲ್ಲ
ಪರಿಷೆ ಬರುವ ಸಾವಿರ ತಿಗಣೆಗಳ
ಪ್ರತೀ ಸರದಾರಗೂ ಅಮರನಾಗುವ ಕನಸು
ಕೇಳಿರಬಹುದು ನೀವು,
ಹೊತ್ತಲ್ಲದ ಹೊತ್ತಲ್ಲೂ ಅರಚುವ
ಆಕಾಶವಾಣಿಯ ಬಿತ್ತರವ
"ಬಲ್ಲಿರೇನಯ್ಯಾ, ಬಲ್ಲಿರೇನಯ್ಯ,
ನಿನ್ನೆ-ನಾಳೆಗಳಿಗಿಂತ, ಇಂದಿನ ನಾನೇ ಅನಂತ"

ಕಂಡ-ಕಂಡ ಕಲ್ಲುಗಳ ಮೇಲೆಲ್ಲ ಕಂಡರಿಸಿ,
ಸೊಲ್ಲೆತ್ತಿದವರ ಸರಿಸಿ ಬದಿಗಿರಿಸಿ,
ಬರೆಸಿ, ಒರೆಸಿ, ಮತ್ತೊಮ್ಮೆ ಬರೆಸಿ,
ಬೆವರೊರೆಸುವಷ್ಟರಲ್ಲಿ ಮುಗಿದೇ ಹೋಯಿತೇ ವರುಷ,
ಮುಗಿದು ಹೋಯಿತೇ ಆ ಎರವಲಿನ ರಸನಿಮಿಷ!
ಸರತಿಯಲಿ ನಿಂತ ಆ ಅನಿಮಿಷರ ಗುಂಪು:
"ಅಯ್ಯೋ! ಈ ನಿಮಿಷ ಮುಗಿಯುವುದು ಎಂತು?
ವರುಷ ಕಳೆದೀತು ಜೋಪಾನ, ಅಮರತ್ವಕ್ಕಿದು ಸೋಪಾನ"
ಹಾಳೂರ ಪರಿಷೆಗೆ ಹೊಸ ತಿಗಣೆಗಳ ಸಾಲು,
ಹೊಸ ವರುಷ, ಹೊಸ ಸಾಲು, ಮತ್ತದೇ ಹಳೆಗೋಳು

Sunday, December 5, 2010

ಎರಡು ಮುಖ


ಅಯೋಮಯದ ದೀರ್ಘ ರಾತ್ರಿ,
ದೇವ ಕುಳಿತ ಬರೆಯಲು
ಚಿಮ್ಮಿದನೋ ನಾಣ್ಯವೊಂದ,
ನೂರೆಂಟು ಸಾಧ್ಯತೆಗಳು;


ಇಲ್ಲಿ ಹಗಲು ಅಲ್ಲಿ ರಾತ್ರಿ
ಮಧ್ಯೆ ಮುಸ್ಸಂಜೆಯು
ರಾತ್ರಿ ಹಗಲ ಮಧ್ಯೆ
ಬರೀ ಕೂಗಳತೆಯ ದೂರವು;


ಅಲ್ಲಿ ಬಿಳಿ, ಇಲ್ಲಿ ಕರಿ,
ಹಲವು ಬಣ್ಣ ತೊಗಲು
ಇಲ್ಲಿ ಬೆಣ್ಣೆ, ಅಲ್ಲಿ ಎಣ್ಣೆ,
ಮಧ್ಯೆ ಬರೀ ಸುಣ್ಣವು;


ಹೊತ್ತ ದೇಹ, ಭಾರೀ ಭಾರ,
ಅರಗಿಸಲು ಬೇಕು ಚೂರ್ಣವು
ಶಯನ ಬರೀ ಮೆತ್ತೆ-ಮೆತ್ತೆ
ಮಲಗಲು ಬೇಕು ಮಾತ್ರೆಯು!


ಸೂರ ತುಂಬ ತಾರೆ ಕಾಟ,
ಬಂತೇ ಮತ್ತೆ ಮಳೆಗಾಲವು?
ಊಟ-ನಿದ್ದೆ-ರೋಗ-ರುಜಿನ,
ಚಿಮ್ಮಿದ ನಾಣ್ಯದಲ್ಲಿಮೋಸವು
!!

ಬುದ್ಧ ನಕ್ಕನೆ?

  ಬೋಧಿವೃಕ್ಷದ ಬಾವಲಿಗಳಿಗೆ ಹೇಸಿ, ನಾಚಿ,
  ಶತಮಾನಗಳಿಂದ ಅವಿತುಕೊಂಡಿದ್ದ ಬುದ್ಧ,
  ಏಕಾಏಕಿ ನಕ್ಕನೆ?  ಇಲ್ಲಾ ಬೆಚ್ಚಿ ಬಿದ್ದನೆ?
  ಇಲ್ಲ, ಇಲ್ಲ....
  ಬುದ್ಧ ನಕ್ಕೇ ಇಲ್ಲ, ನಗಲು ಸಿಕ್ಕೇ ಇಲ್ಲ!!
  ಒಂದು ಶವಕ್ಕೇ ಹೆದರಿ ಹೈರಾಣಾದ ಬುದ್ಧ,
  ಒಂದೇ ರೋಗಿಯ ಕಂಡು ಕಂಗಾಲಾಗಿದ್ದ!
  ಒಂದು ಮುದುಕಿಯ ಕಂಡೇ ಮನ ಮುದುರಿಕೊಂಡಿದ್ದ...
  ಅವ ನಕ್ಕಿದ್ದೇಕೆ?
  ನಗಲು ಅವನೇ ಬೇಕಿತ್ತೆ?
  ಏನನು ನೆನೆದು ನಕ್ಕ?  ಯಾರನು ನೋಡಿ ನಕ್ಕ?
  ಛೆ!  ಅವನು ನಕ್ಕೇ ಇಲ್ಲ.
  ನಕ್ಕರೆ ಅತ್ತೀತು ಭೂಮಿ!
  ನಾಚಿ ತಲೆಕೆಳಗಾದೀತು ಭೋಧೀವೃಕ್ಷ!!
  ಅಣುಸ್ಫೋಟದ ಕಚಗುಳಿಗೂ
  ಅವಗೆ ನಗೆ ಬರಲಿಕ್ಕಿಲ್ಲ!!
  ಕಡುಕಪ್ಪು ನಿಟ್ಟುಸಿರು, ಕಣ್ಣೀರ ಕಾರ್ಮೋಡ
  ಮನದಿಗಿಲು, ತೊಡೆನಡುಕ
  ನಗುವ ಲಕ್ಷಣಗಳೇನು?
  ಛೆ!  ಇದು ದಾರ್ಷ್ಟ್ಯ, ಅನ್ಯಾಯ,
  ನಕ್ಕವರಾರೋ? ಅತ್ತವರೆಷ್ಟೋ?
  ಯಾರ ಹೆಸರೋ?  ಯಾರ ಬಸಿರೋ?
  ಬುದ್ಧ ನಕ್ಕೇ ಇಲ್ಲ!
  ನಕ್ಕರೆ ಬುದ್ಧನೇ ಅಲ್ಲ!!


  ಭಾರತದ ಮೊದಲ ಪರೀಕ್ಷಾರ್ಥ ಅಣು ಸ್ಫೋಟದ ಸಾಂಕೇತಿಕ ಹೆಸರು : ನಗುವ ಬುದ್ಧ ("Smiling Buddha")