Friday, November 12, 2010

ವೇಷ

ಇದಾವ ಜನ್ಮದ ನಂಟು,
ಅಂಟಿಯೇ ಬಂದಿಹುದು,
ಬಿಟ್ಟರೂ ಬಿಡದಿಹುದು :
ಹುಲಿವೇಷ, ಹ್ಯಾಲೊವಿನ್ ವೇಷ,
ದೇಶ ಬಿಟ್ಟರೂ ಬಿಡದ ವೇಷಗಳ "ಆವೇಶ"!

"ಇದೆಲ್ಲಿಂದ ಕಲಿತೆಯೋ ಈ ಹುಲಿ ವೇಷ"
ಅಪ್ಪ ಗದರಿದ್ದ ವರ್ಷಗಳ ಹಿಂದೆ.
"ನಮ್ಮವರಿಗಲ್ಲ ಇದು ನೋಡು"
ಅಮ್ಮನ ಸೀರೆಯಂಚು ಕಣ್ಣ ಮರೆಮಾಡಿತ್ತು.
ಆದರೂ ಅದೇಕೋ ಅರಿವಿಗೆ ಮೀರಿದ ಆಸೆ:
ಹುಲಿಯೋ, ಮೇಕೆಯೋ, ಒಂದು ಕರಿ ಕುರಿ ಮರಿಯೋ,
ಯಾವುದಾದರೊಂದು ವೇಷ ಹಾಕಿ ಊರು ಸುತ್ತುವ ಆಸೆ!
ಊರ ಪ್ರತಿಮನೆಯ ಮೂಲೆ ಇಣುಕುವ ಆಸೆ!

ದಿನಕ್ಕೊಂದು ವೇಷ ಹಾಕಿ,
ಕಂಬಗಳಿಗೂ ಭಾಷೆ ಕೊಟ್ಟು
ಮೀನಮೇಷ ಎಣಿಸದೇ ದಾಟಿ ಬಂದಾಗಿತ್ತು!
ಸೂರ್ಯನ ಬೆಂಬತ್ತಿ, ಕತ್ತಲೆಯ ಹಿಂದಟ್ಟಿ
ಹನುಮ ನಾಚುವ ಹಾಗೆ ನಭಕ್ಕೆ ನೆಗೆದಾಗಿತ್ತು!

ಮಗ ಬಂದು ಎದುರು ನಿಂತು,
ಭಯಹುಟ್ಟಿಸುವ ಮುಖವಾಡ ತೊಟ್ಟು
"ಅಪ್ಪ, ಹ್ಯಾಲೋವಿನ್ ವೇಷ" ಎಂದು ಬೊಬ್ಬಿಟ್ಟಾಗ,
ಬಾಯಿ ತೊದಲಿತ್ತು "ಎಲ್ಲಿತ್ತೋ ಈ ಹ್ಯಾಲೋವಿನ್ ವೇಷ?"
ಮನಸು ಬಿಕ್ಕಳಿಸಿತ್ತು "ನಮ್ಮವರಿಗಲ್ಲ ಇದು ನೋಡು",
ಯಾವುದೋ ವೇಷ, ಯಾವುದೋ ದೇಶ,
ಭೂಮಿಸುತ್ತಿ ಬಂದರೂ ಮತ್ತದೇ ಮಾತು.
ಕೋಶ ಓದಿ, ದೇಶ ಸುತ್ತಿದರೂ
ಬೆನ್ನು ಹತ್ತಿ ಬಂದ ಅದೇ ಹಳೆ ವೇಷ!

No comments:

Post a Comment