Friday, December 31, 2010

ತಿಗಣೆಗಳ ಪರಿಷೆ

ತಿಗಣೆಗಳ ಪರಿಷೆ

ಕಲ್ಲಕೆತ್ತಿ, ಭಿತ್ತಿ ಬರೆಸಿ
ಮೆಲ್ಲನೆ ಅಮರನಾಗುವ ಹುಚ್ಚು
ಇಂದು-ನಿನ್ನೆಯದಲ್ಲ, ನಾಳೆ ಮುಗಿಯುವದಲ್ಲ
ಪರಿಷೆ ಬರುವ ಸಾವಿರ ತಿಗಣೆಗಳ
ಪ್ರತೀ ಸರದಾರಗೂ ಅಮರನಾಗುವ ಕನಸು
ಕೇಳಿರಬಹುದು ನೀವು,
ಹೊತ್ತಲ್ಲದ ಹೊತ್ತಲ್ಲೂ ಅರಚುವ
ಆಕಾಶವಾಣಿಯ ಬಿತ್ತರವ
"ಬಲ್ಲಿರೇನಯ್ಯಾ, ಬಲ್ಲಿರೇನಯ್ಯ,
ನಿನ್ನೆ-ನಾಳೆಗಳಿಗಿಂತ, ಇಂದಿನ ನಾನೇ ಅನಂತ"

ಕಂಡ-ಕಂಡ ಕಲ್ಲುಗಳ ಮೇಲೆಲ್ಲ ಕಂಡರಿಸಿ,
ಸೊಲ್ಲೆತ್ತಿದವರ ಸರಿಸಿ ಬದಿಗಿರಿಸಿ,
ಬರೆಸಿ, ಒರೆಸಿ, ಮತ್ತೊಮ್ಮೆ ಬರೆಸಿ,
ಬೆವರೊರೆಸುವಷ್ಟರಲ್ಲಿ ಮುಗಿದೇ ಹೋಯಿತೇ ವರುಷ,
ಮುಗಿದು ಹೋಯಿತೇ ಆ ಎರವಲಿನ ರಸನಿಮಿಷ!
ಸರತಿಯಲಿ ನಿಂತ ಆ ಅನಿಮಿಷರ ಗುಂಪು:
"ಅಯ್ಯೋ! ಈ ನಿಮಿಷ ಮುಗಿಯುವುದು ಎಂತು?
ವರುಷ ಕಳೆದೀತು ಜೋಪಾನ, ಅಮರತ್ವಕ್ಕಿದು ಸೋಪಾನ"
ಹಾಳೂರ ಪರಿಷೆಗೆ ಹೊಸ ತಿಗಣೆಗಳ ಸಾಲು,
ಹೊಸ ವರುಷ, ಹೊಸ ಸಾಲು, ಮತ್ತದೇ ಹಳೆಗೋಳು

Sunday, December 5, 2010

ಎರಡು ಮುಖ


ಅಯೋಮಯದ ದೀರ್ಘ ರಾತ್ರಿ,
ದೇವ ಕುಳಿತ ಬರೆಯಲು
ಚಿಮ್ಮಿದನೋ ನಾಣ್ಯವೊಂದ,
ನೂರೆಂಟು ಸಾಧ್ಯತೆಗಳು;


ಇಲ್ಲಿ ಹಗಲು ಅಲ್ಲಿ ರಾತ್ರಿ
ಮಧ್ಯೆ ಮುಸ್ಸಂಜೆಯು
ರಾತ್ರಿ ಹಗಲ ಮಧ್ಯೆ
ಬರೀ ಕೂಗಳತೆಯ ದೂರವು;


ಅಲ್ಲಿ ಬಿಳಿ, ಇಲ್ಲಿ ಕರಿ,
ಹಲವು ಬಣ್ಣ ತೊಗಲು
ಇಲ್ಲಿ ಬೆಣ್ಣೆ, ಅಲ್ಲಿ ಎಣ್ಣೆ,
ಮಧ್ಯೆ ಬರೀ ಸುಣ್ಣವು;


ಹೊತ್ತ ದೇಹ, ಭಾರೀ ಭಾರ,
ಅರಗಿಸಲು ಬೇಕು ಚೂರ್ಣವು
ಶಯನ ಬರೀ ಮೆತ್ತೆ-ಮೆತ್ತೆ
ಮಲಗಲು ಬೇಕು ಮಾತ್ರೆಯು!


ಸೂರ ತುಂಬ ತಾರೆ ಕಾಟ,
ಬಂತೇ ಮತ್ತೆ ಮಳೆಗಾಲವು?
ಊಟ-ನಿದ್ದೆ-ರೋಗ-ರುಜಿನ,
ಚಿಮ್ಮಿದ ನಾಣ್ಯದಲ್ಲಿಮೋಸವು
!!

ಬುದ್ಧ ನಕ್ಕನೆ?

  ಬೋಧಿವೃಕ್ಷದ ಬಾವಲಿಗಳಿಗೆ ಹೇಸಿ, ನಾಚಿ,
  ಶತಮಾನಗಳಿಂದ ಅವಿತುಕೊಂಡಿದ್ದ ಬುದ್ಧ,
  ಏಕಾಏಕಿ ನಕ್ಕನೆ?  ಇಲ್ಲಾ ಬೆಚ್ಚಿ ಬಿದ್ದನೆ?
  ಇಲ್ಲ, ಇಲ್ಲ....
  ಬುದ್ಧ ನಕ್ಕೇ ಇಲ್ಲ, ನಗಲು ಸಿಕ್ಕೇ ಇಲ್ಲ!!
  ಒಂದು ಶವಕ್ಕೇ ಹೆದರಿ ಹೈರಾಣಾದ ಬುದ್ಧ,
  ಒಂದೇ ರೋಗಿಯ ಕಂಡು ಕಂಗಾಲಾಗಿದ್ದ!
  ಒಂದು ಮುದುಕಿಯ ಕಂಡೇ ಮನ ಮುದುರಿಕೊಂಡಿದ್ದ...
  ಅವ ನಕ್ಕಿದ್ದೇಕೆ?
  ನಗಲು ಅವನೇ ಬೇಕಿತ್ತೆ?
  ಏನನು ನೆನೆದು ನಕ್ಕ?  ಯಾರನು ನೋಡಿ ನಕ್ಕ?
  ಛೆ!  ಅವನು ನಕ್ಕೇ ಇಲ್ಲ.
  ನಕ್ಕರೆ ಅತ್ತೀತು ಭೂಮಿ!
  ನಾಚಿ ತಲೆಕೆಳಗಾದೀತು ಭೋಧೀವೃಕ್ಷ!!
  ಅಣುಸ್ಫೋಟದ ಕಚಗುಳಿಗೂ
  ಅವಗೆ ನಗೆ ಬರಲಿಕ್ಕಿಲ್ಲ!!
  ಕಡುಕಪ್ಪು ನಿಟ್ಟುಸಿರು, ಕಣ್ಣೀರ ಕಾರ್ಮೋಡ
  ಮನದಿಗಿಲು, ತೊಡೆನಡುಕ
  ನಗುವ ಲಕ್ಷಣಗಳೇನು?
  ಛೆ!  ಇದು ದಾರ್ಷ್ಟ್ಯ, ಅನ್ಯಾಯ,
  ನಕ್ಕವರಾರೋ? ಅತ್ತವರೆಷ್ಟೋ?
  ಯಾರ ಹೆಸರೋ?  ಯಾರ ಬಸಿರೋ?
  ಬುದ್ಧ ನಕ್ಕೇ ಇಲ್ಲ!
  ನಕ್ಕರೆ ಬುದ್ಧನೇ ಅಲ್ಲ!!


  ಭಾರತದ ಮೊದಲ ಪರೀಕ್ಷಾರ್ಥ ಅಣು ಸ್ಫೋಟದ ಸಾಂಕೇತಿಕ ಹೆಸರು : ನಗುವ ಬುದ್ಧ ("Smiling Buddha")

Friday, December 3, 2010

ಕಾಲ


ಕಾಲ

ದೂರಕೆ ದೂರಕೆ ಹಾರುವ ನಿಹಾರಿಕೆ,
ನಿನ್ನ ಗಮನವೆಲ್ಲಿ?
ನಿನ್ನಾಗಮನವನೆ ಕೋರಿ ಕುಳಿತಿರುವೆ
ನನ್ನತನವ ಚೆಲ್ಲಿ..

ಕಲ್ಪದಾದಿಯಲಿ, ಕಾಲರಾತ್ರಿಯಲಿ
ಇರವಿನರಿವೆ ಹೊಸತು
ನಿನ್ನೊಳಗೋ ನಾನು, ನನ್ನೊಳಗೋ ನೀನು,
ನಮ್ಮೊಳಗೆ ವಿಶ್ವ ಕಲೆತು..
ಹಗಲು ರಾತ್ರಿಗಳೋ, ನಿನ್ನೆ-ನಾಳೆಗಳೋ
ಎಲ್ಲ ಒಂದೆ ನಮಗೆ.
ಸುತ್ತಿಸುರುಳಿದೆವು, ಮತ್ತೆ ಅರಳಿದೆವು
ಕೃಷ್ಣರಂಧ್ರದೊಳಗೆ.

ಯಾವುದೋ ಘಳಿಗೆ, ಕಾಣದ ಕರೆಗೆ
ನಿನ್ನ ಒಲವ ಸುರಿದೆ
ಕಾಲನನು ಹೆತ್ತು, ಕನಸುಗಳ ನೆಟ್ಟು.
ನೀಲ ನಭದಿ ಜಿಗಿದೆ..
ದಿನಕೊಂದು ಬಣ್ಣ, ನೀ ಮರೆತೆ ನನ್ನ,
ನಿಂತಲ್ಲೇ ನಾನು ಕುಸಿದೆ
ಅಗಲಿಕೆಯ ಸುಳಿಗೆ, ಅವಮಾನದುರಿಗೆ,
ನಾನೇ ನನ್ನ ಒಳಗೆ

ತಾರೆಗಳ ಗಡಣ, ಬಣ್ಣಗಳ ಜನನ,
ಶಬ್ದಗಳು ಸೇರಿಕೊಂಡು.
ರಾಸ ಲೀಲೆಯಲಿ, ಲಾಸ್ಯ ಮೋದದಲಿ,
ಎಲ್ಲ ಒಂದಕೊಂದು,                   
ಪ್ರೀತಿಯಾ ಮಿಂಚು, ಮಾತಿನ ಗುಡುಗು
ಕನಸುಗಳ ಮಳೆಯ ಹೊಳೆಯು
ಕೆರಳಿರಲು ಚಿತ್ತ, ಅರಳುವುದು ಹುತ್ತ
ನೀ ಕಂಡ ಕನಸು ಹಲವು..

ಎಳದೊಯ್ದ ಸುಳಿಯೂ, ನೆನಪಿನಾ ಸೆಳೆಯೂ
ಸಮನಾದ ಒಂದು ಘಳಿಗೆ,
ನಾ ಕರೆಯಬೇಕು, ನೀ ತಿರುಗಬೇಕು,
ಈ ಅಮರ ಕಮರಿನಿಡೆಗೆ
ಕಾಲನನು ಅಪ್ಪಿ, ಆಗಸವ ಸುತ್ತಿ
ಹರಸಿದರೆ ಒಮ್ಮೆ ಅವಗೆ,
ಮತ್ತೆ ಹೊಸ ಬದುಕು, ಬೇಕೆ ಹಳೆ ಸರಕು?
ಒಂಟಿತನವು* ನಮಗೆ.
-----------

*ಒಂಟಿತನ :  Singularity

Friday, November 12, 2010

ಮನವಿ

ಕದಡಬೇಡ ನೀರ ಗೆಳೆಯ,
ಎಬ್ಬಿಸದಿರು ಅಲೆಯ
ತೊಳೆಯಬೇಡ ನೀರಿನಲ್ಲಿ
ನೀ ಹೊತ್ತು ತಂದ ಕೊಳೆಯ ||

ಎಂದೋ ಯಾರೋ ತಂದ ಕೆಸರು
ಮಡುಗಟ್ಟಿದೆ ಮನವು,
ಹಳೆಯ ಕೊಳೆಯ ತೊಳೆದು ತೊಳೆದು
ಸೋತಿದೆ ಈ ತನುವು ||

ಜೀವಸೆಲೆಗೆ ಕೆಸರುಗಟ್ಟಿ,
ಬತ್ತುತಿದೆ ಒಲವು.
ಶಾಂತಿಯನು ಹಾರೈಸಿದೆ  ಮನ,
ಉಮ್ಮಳಿಸಿದೆ ಅಳುವು.

ಅರಳಬಹುದು ಇಂದೋ-ನಾಳೆ,
ನಗುವ ಎರಡು ಕಮಲ,
ಎಂಬ ಕನಸ ನಂಬಿ ಕುಳಿತು,
ಸಹಿಸುತಿರುವೆ ಕೊಳೆಯ..

ಬೆಳ್ಳೂರು ಕೊಕ್ಕರೆಯ ಬ್ಯುಸಿನೆಸ್ ಮೊಡೆಲ್ಲು

ಬೆಳ್ಳೂರು ಕೊಕ್ಕರೆಯ ಬ್ಯುಸಿನೆಸ್ ಮೊಡೆಲ್ಲು
ಬಹಳ ಸಿಂಪಲ್ಲು:

ಮಡಚಿದ ರೆಕ್ಕೆ, ಅಡಗಿಸಿಟ್ಟ ಕೊಕ್ಕು,
ಏಕಾಗ್ರ ಚಿತ್ತ,  win-win ಮಂತ್ರ.
ಕಣ್ಣು ಮುಚ್ಚಿ ನಿಂತ ಭಂಗಿಗೆ,
ಹೊದ್ದು ಕುಳಿತ ಬಿಳಿಯ ಅಂಗಿಗೆ,
 ನಾಚಬಹುದು ಯಾವುದೂ ಋಷಿ!
ಗಾಳ-ಬಲೆಗಳ ಗೋಜಿಲ್ಲ.
ಅವನು ಇವನೆಂಬ ಮುಲಾಜಿಲ್ಲ.
ಅಂತರ್ಜಾಲದ ಮಂತ್ರ-ಮಾಟ,
ಮುಚ್ಚಿದ ಕಣ್ಣಿನ ಕುತಂತ್ರ ನೋಟ.

ದಿಡೀರ್ ಸ್ವರ್ಗದ ತೆವಲಿನ,
ಹೊಸ ಗಾಯಿತ್ರಿ ಮಂತ್ರದ ಕನಸಿನ,
ಮರಿ ಮೀನುಗಳು ಸಾಲಾಗಿ ನಿಂತಿವೆ!
ಒಂದರ ಹಿಂದೆ ಇನ್ನೊಂದು
ತಾ ಮುಂದು ನಾ ಮುಂದು.
ಇಹದ ನಿಜವ ಮರೆಸಿಬಿಡುವ,
ಪರದ ಸುಧೆಯ ಸುರಿಸಲಿರುವ
ಅಕ್ಕರೆಯ ಕೊಕ್ಕರೆ ಕಣ್ಬಿಡುವುದೆಂದು?

ರಕ್ತ-ಬೆವರು ಈ ಕೊಕ್ಕರೆಗೆ ಭಾರೀ ಅಲರ್ಜಿ,
"ಮಾಮೇಕಮ್ ಶರಣಮ್ ವ್ರಜ಼" 
ಅಭಯದಾನಕೆ ಈ ಕೊಕ್ಕರೆಯೇ ಪ್ರಸಿದ್ಧಿ!
ಭಯಭೀತ ಮೀನುಗಳು ಕೊಕ್ಕರೆಗೆ ಬೇಕಿಲ್ಲ,
ಭಯೋತ್ಪಾದನೆ ಇದರ ಬಿಸಿನೆಸ್ ಮೊಡೆಲ್ಲೂ ಅಲ್ಲ!
ಹಿಂದು-ಮುಂದಿನದೆಲ್ಲ ಮರೆತು,
ಶರಣು ನಿಂತಿಹ ಮತ್ಸ್ಯಗಣಕೆ,
ಅರಿವು ಮೂಡಿ ಓಡುವದರೊಳಗೆ
ಮುಕ್ತಿ ತೋರುವ ಶುದ್ಧ ಬಯಕೆ!

ಮತ್ತದೇ  win-win  ಉಭಯಲಾಭದ ಮಂತ್ರ,
ಅರಿವಿದ್ದರೂ ಅನುಭವಿಸದೇ ವೇದ್ಯವಾಗದ ತಂತ್ರ!

ಇಲ್ಲೊಬ್ಬನಿದ್ದ...

ಇಲ್ಲೊಬ್ಬನಿದ್ದ,
ಅವನ ಹೆಸರೋ ಹಲವು,
ಯಾರೋ ಕರೆದದ್ದು, ಮತ್ಯಾರೋ ಬಯ್ದದ್ದು,
ಬೀಟಿನ ಪೋಲೀಸಿನವ ಗೀಚಿಕೊಂಡದ್ದು
ಕಂಡವರ ಮುಖನೋಡಿ,
ಕೊಡುವವರ ಕಿಸೆನೋಡಿ ಇವ ಹೇಳಿಕೊಂಡದ್ದು,
ಯಾರದೋ  ಚಿತ್ತಕ್ಕೆ ಪಿತ್ಥಕ್ಕೆ
ಸೂಟಿಯಗುವ ಹೆಸರು ಇವ ಹೇಳಿ ಜಾರಿದ್ದು!

ಜಾರುವ ಸಿಂಬಳತಿಂದೇ,
ಊರಗಲ ಬೆಳೆದಿದ್ದ
ಏಲ್ಲಿ ನೋಡಿದರಲ್ಲಿ ಇವನಿದ್ದೇ ಇದ್ದ,
ಗುರುತಿಲ್ಲದೇ ನಕ್ಕು,
ಸುಮ್ಮಸುಮ್ಮನೇ ಬಿಕ್ಕಿ
ರೊಕ್ಕ ಹೆಕ್ಕುತ್ತಿದ್ದ ಭೂಪ
ಅವನದೇ ತದ್ರೂಪು,
ಊರೆಲ್ಲ ಅಲೆದಾಡಿ
ಆಲ್ಲಲ್ಲಿ ಕದ್ದು ಸುದ್ದಿಯಲ್ಲಿದ್ದಾಗ,
ನಿದ್ದೆಮಾಡದೇ ಇವ ಸುಮ್ಮನೇ ಅಡಗಿದ್ದ.
ಮತ್ತೆ ಹಸಿವಾದಾಗ ರಸ್ತೆಗೋಡಿದ್ದ,

ಇತ್ತಿತ್ತ ಬೆಳೆದಿದ್ದ,
ಕನಸುಗಳನೆಣಿಸುತ್ತ ಊರೆಲ್ಲ ಬದುಕಿದ್ದ.
ಕಾರೊಂದು ನಿಂತಾಗ,
ಒಳಗಿದ್ದ ಆಸಾಮಿ ಮೈಮುರಿದು ಕುಂತಾಗ,
ಥಟ್ಟನೆ ಏನನ್ನೋ ಕೈಗಿತ್ತು,
ಏನು ಎನ್ನುವುದರೊಳಗೆ ಮಾರಿದ್ದ
ಗಾಡಿಬಂದತ್ತ ತೂರಿ ಹಾಯಾಗಿದ್ದ

ಕಾರ ಮೈಮೇಲೆಲ್ಲ ಇವನ ಉಗುರಿನ ಗೀಚು,
ಕಿಟಕಿ ಗಾಜಿನ ಮೇಲೆ ಇವನದೇ ಬೆರಳಚ್ಚು
ಕಂಡು ಹೊಗೆಯಾಡಿದ್ದೆ,
ಒಳಗೊಳಗೇ ಕುದಿದಿದ್ದೆ,
ಅವ ಬಂದು ನಿಂತಾಗ ಏನೇನೋ ತೊದಲಿದ್ದೆ,
ಮುಖದ ನಗುವನು ಕಂಡು
ಸುಮ್ಮನೇ ಮುಖಹೊರಳಿಸಿದ್ದೆ.

ಈಗಿಲ್ಲಿ ಅವನನಿಲ್ಲ,
ಅವನದೇ ತದ್ರೂಪು, ಅವನದೇ ಬಹುರೂಪು
ಬಂದು ನಿಂತಿದ್ದಾನೆ ಅದೇ ವೃತ್ತದಲ್ಲಿ,
ಸೇರಿದ ರಸ್ತೆ ಮತ್ತೆ ಬೀಳ್ಕೊಡುವಲ್ಲಿ,
ಅವನಾರೋ? ಇವನಾರೋ?
ಹೇಗೆ ಹೇಳಲಿ ನಾನು ಕಂಡರಿಯದ ಹೆಸರ?
ಇಲ್ಲೊಬ್ಬನಿದ್ದ,
ಅವನ ಜಾಗಕ್ಕೀಗ ಮತ್ತೊಬ್ಬ ಬಂದ!

ಗೋಕುಲದ ಕನಸು

ದ್ವಾರಕೆಯ ದರ್ಬಾರಿನಲ್ಲಿ
ಕೂತು ಪಟ್ಟಾಂಗ ಹೊಡೆಯುವಾಗ,
ಮೆತ್ತನೆಯ ಸಾರೋಟಿನಲ್ಲಿ
ಸುಂಯ್ಯೆಂದು ಸಾಗುವಾಗ,
ಮನವನೇಕೋ ಕಾಡುತಿಹುದು
ಗೋಕುಲದಿ ತಿಂದ ಬೆಣ್ಣೆ ನೆನಪು.
ಸುತ್ತ ಹಸಿರು, ಕೈಲಿ ಕೊಳಲು
ಹಸಿರ ಮಧ್ಯೆ ಕುಣಿವ ನವಿಲು,
ಮುತ್ತು ಸುರಿದು ನಗುವ ಮಳೆ,
ಹೊತ್ತಿಗೆಲ್ಲಿತ್ತು ಬೆಲೆ?

ಬೆಣ್ಣೆ ಮೊಸರು ಬಂಡಿ ತುಂಬಿ,
ಮಥುರೆಯೆಡೆಗೆ ಸಾಗುವಾಗ,
ತಿರುಗಿ ಬಂದ ಗೊಲ್ಲ ದಂಡು,
ಕಂಡ ಸೊಬಗ ಹೊಗಳುವಾಗ,
"ಬಿಲ್ಲ ಹಬ್ಬ! ಸ್ವಣ ತೇರು!!"
ಒಂದೆ ಎರಡೆ, ನೂರು ಕನಸು
ಸಿಕ್ಕ ನೆಪ, ಕಂಸನೋಲೆ,
ಸೆಳೆದು ತಂತು ಮಥುರೆಯೆಡೆಗೆ
ರಾಧೆ-ನಂದ ಎಲ್ಲ ನಿಂತು
ಹರಸಿ ಕಳಿಸಿದ್ದಿನ್ನೂ ನೆನಪು.

ಮತ್ತೆ ನೂರು ಕನಸು ಕಂಡು,
ಸುತ್ತ ನೀರ ಬೇಲಿ ಹಾಕಿ,
ದ್ವಾರಕೆಯನು ಕಟ್ಟಿ ಕುಳಿತು
ಲಾಭ ನಷ್ಟ ಎಣಿಸುತಿರಲು,
ತೂಗು ಮಂಚ ಜೀಕುತಿರಲು,
ಮತ್ತದೇ ಹಳೆಯ ಕನಸು:
ಆ ವಿಚಿತ್ರ ಕನಸಿನೊಳಗೋ?
ಸಗಣಿ-ಬೆರಣಿ ಎಲ್ಲ ಸೊಗಸು:

ಕಂಪ್ಯೂಟರ್ ಕೂಲಿ

"ಕೂಲಿ ಬೇಕೆ ಸಾರ್, ಕಂಪ್ಯೂಟರ್ ಕೂಲಿ,
ತಾಸಿನಿಂದ ತಿಂಗಳವರೆಗೆ,
ಅಂಗಳದಿಂದ ಮಂಗಳನವರೆಗೆ,
ಎಲ್ಲೇ ಇರಲಿ, ಎಷ್ಟೇ ಇರಲಿ
ವೀಸಾ ಒಂದು ಕೊಡಿಸಿರಿ ಸಾಕು,
ಕೂಲಿ ಬೇಕೇ ಸಾರ್, ಕೂಲಿ, ಕಂಪೂಟರ್ ಕೂಲಿ"


"ತಾಸಿಗೋ ಐವತ್ತು ಡಾಲರ್
ಸಾಲಿಗೆ ಐವತ್ತು ಸೆಂಟ್,
ಅವಾಗಾವಾಗ ಒಂದಷ್ಟು ಕೋಕು;
ಇನ್ನೂ ಖುಷಿಯಾದರೆ ಒಂದಷ್ಟು ಸ್ಟಾಕು;


ನಾನೇನು ಕವಿಯಲ್ಲ,
ಗಟ್ಟಿ ಭಾಷಣದ ಕಲಿಯಲ್ಲ;
ನಾ ಗೀಚಿದ ಸಾಲಿಗೆ ಪದವಿಗಳ ಗೋಜಿಲ್ಲ;
ತಿಂಗಳಾದ ಮೇಲೆ ನೀವುಂಟು, ಸಾಲುಂಟು,
ನನಗೂ ಅದಕೂ ಇನ್ನೆಲ್ಲ ನಂಟು,
ನಿಮ್ಮ ಹೆಸರೇ ಇರಲಿ, ನನಗದರ ಬೆಲೆ ಬರಲಿ,


ಯಾವುದೊ ಅಕ್ಷಾಂಶ-ರೇಖಾಂಶಗಳು ಸೇರುವಲ್ಲಿ ಕುಂತಾಗ;
ಹುಟ್ಟಿದೂರಿನ ಬೆಟ್ಟ ಮತ್ತೆ ನೆನಪಾದಾಗ,
ಬರಹದಲ್ಲೊಂದಿಷ್ಟು ಗೀಚಿ ಕಳಿಸಿದ ನೆನಪು;
 SYBASE ಮಾದಯ್ಯ,  Oracle  ಚೌಡಯ್ಯ,
 D-BASE  ಕುಲಕರ್ಣಿ, C++  ನಾಡಕರ್ಣಿ;
ಹುಟ್ಟಿದ್ದು, ಬೆಳೆದದ್ದು, ಎಲ್ಲಾ ಹೀಂಗೇನೆ,
ಅದಕೇಕೆ ತುರಿಕೆ,
ಜಗದ ಕೂಲೀ ಸಾಹಿತ್ಯಕ್ಕೆ ನಮ್ಮದೊಂದಿಷ್ಟು ಬೆರಕೆ"

ಕೋಳೀ ಅಂಕ

ಬನ್ರಲಾ, ನೋಡ್ರಲಾ!
ಒಮ್ಮೆ ನೋಡಿದರೆ ಮತ್ತೊಮ್ಮೆ,
ಮತ್ತೊಮ್ಮೆ ನೋಡಿದರೆ ಮಗದೊಮ್ಮೆ
ಸಾಯುವವರೆಗೂ ನೋಡಲೇಬೇಕಾದ
ಕೋಳೀ ಅಂಕ! ಇದಕ್ಕಿಲ್ಲ ಸುಂಕ!!

ಕೆಂಪು ಕೋಳಿ, ಹಸಿರು ಕೋಳಿ
ಎರಡೂ ನಮ್ಮವೇ, ನಿಮ್ಮವೇ
ಕತ್ತಿ ಗುರಾಣಿ ಎಲ್ಲ ಗೊತ್ತು
ಕೊಟ್ಟಿದ್ದೇವೆ ಎರಡಕ್ಕೂ ಮತ್ತು.
ಕತ್ತಿ ಕಟ್ಟಿ ಬಿಟ್ಟಿದ್ದೇವೆ
ಎತ್ತಿಕಟ್ಟಿ ಬಿಟ್ಟಿದ್ದೇವೆ

ಯಾರಲ್ಲಿ, ಬಂದನೇನು ಖಾಕಿಯವನು?
ಅವನಿಗಷ್ಟು ಕಾಫಿ ಕೊಡಿ
ಬಂದರೇನು ಬಾಂದಿನವರು?
ಅವರಿಗಷ್ಟು ಬ್ರಾಂದಿ ಕೊಡಿ
ಬೇಕು ನಮಗೆ, ಅವರು-ಇವರು
ಎಲ್ಲರನ್ನು ಬದುಕಬಿಡಿ ..

ಪ್ರಾಣಿ ಹಿಂಸೆ ಮಹಾ ಪಾಪ,
ನನಗೂ ಗೊತ್ತು, ನಿಮಗೂ ಗೊತ್ತು.
ಪಾಪಿ ಕೋಳಿಗೇನು ಗೊತ್ತು?
ನಡೆಯಲಿ ಬಿಡಿ ಇದೊಂದು ಸಾರಿ
ಕೊಳ್ಳಿ-ಕತ್ತಿ-ಖಾಕಿಯವರು..
ಸಂಸಾರಸ್ಥರು ಸ್ವಾಮಿ! ಬದುಕಬಿಡಿ.

ನಿಮ್ಮದಂತೂ ಪವಿತ್ರ ಆತ್ಮ
ಪಾಪಲೇಪವಿಲ್ಲವೆನಿತು..
ನಾನೋ ಕೆಸರಗೀಳಿನ ಕೇಸರಿ
ನನ್ನ ನಂಬಿ, ಮಝಾ ಮಾಡಿ..
ನಿಮ್ಮ ಧರ್ಮ ಕರ್ಮ ಮಾಡಿ
ಅದರ ಫಲ ನನಗೆ ಬಿಡಿ
ನನ್ನ ನಂಬಿ ಆಟ ನೋಡಿ.

ಕೆಂಪೋ ಹಸಿರೋ ಸಾಯಲಿ ಬಿಡಿ
ಕೋಳಿಜಾತಿಗಿಲ್ಲ ಸಾವು,
ಹೊಡೆದಾಡುವುದು ಜಾತಿಧರ್ಮ,
ಧರ್ಮಕಾಗಿ ಸಾಯಲಿಬಿಡಿ
ಕತ್ತುಕುಯ್ದರೂ ಕತ್ತಿಯೆತ್ತಿ
ಮುನ್ನುಗ್ಗುವ ಮಾಟ ನೋಡಿ

ಯಾವ ಕೋಳಿ? ಎಲ್ಲಿ ಗಾಯ?
ಎಂಥ ಪಟ್ಟು! ಎಂಥಮೆಟ್ಟು!!
ಉಸಿರು ಹಿಡಿದು ನೋಡುತ್ತಿರಿ,
ಭಾವನೆಗಳ ಹಿಡಿದುಕೊಳ್ಳಿ,
ಭಾವನೆಗಳ ಹಿಡಿದು ಕೊಲ್ಲಿ,
ಕೊಳ್ಳಿ ಹಿಡಿದು ನೋಡುತ್ತಿರಿ

ಬಿಟ್ಟ ಕಣ್ಣು ಬಿಟ್ಟ ಹಾಗೆ,
ಕೋಳಿ-ಕತ್ತಿ ಕೆಂಪು ಬಣ್ಣ!
ನೋಡುತ್ತಿರಿ, ಎಣಿಸುತ್ತಿರಿ,
ಹೊತ್ತು ಮುಳುಗುವ ತನಕ
ಸುಸ್ತುಹೊಡೆಯುವ ತನಕ
ನನಗಾಗಿ ನೋಡುತ್ತಿರಿ, ನೋಡುತ್ತಿರಿ

ವೇಷ

ಇದಾವ ಜನ್ಮದ ನಂಟು,
ಅಂಟಿಯೇ ಬಂದಿಹುದು,
ಬಿಟ್ಟರೂ ಬಿಡದಿಹುದು :
ಹುಲಿವೇಷ, ಹ್ಯಾಲೊವಿನ್ ವೇಷ,
ದೇಶ ಬಿಟ್ಟರೂ ಬಿಡದ ವೇಷಗಳ "ಆವೇಶ"!

"ಇದೆಲ್ಲಿಂದ ಕಲಿತೆಯೋ ಈ ಹುಲಿ ವೇಷ"
ಅಪ್ಪ ಗದರಿದ್ದ ವರ್ಷಗಳ ಹಿಂದೆ.
"ನಮ್ಮವರಿಗಲ್ಲ ಇದು ನೋಡು"
ಅಮ್ಮನ ಸೀರೆಯಂಚು ಕಣ್ಣ ಮರೆಮಾಡಿತ್ತು.
ಆದರೂ ಅದೇಕೋ ಅರಿವಿಗೆ ಮೀರಿದ ಆಸೆ:
ಹುಲಿಯೋ, ಮೇಕೆಯೋ, ಒಂದು ಕರಿ ಕುರಿ ಮರಿಯೋ,
ಯಾವುದಾದರೊಂದು ವೇಷ ಹಾಕಿ ಊರು ಸುತ್ತುವ ಆಸೆ!
ಊರ ಪ್ರತಿಮನೆಯ ಮೂಲೆ ಇಣುಕುವ ಆಸೆ!

ದಿನಕ್ಕೊಂದು ವೇಷ ಹಾಕಿ,
ಕಂಬಗಳಿಗೂ ಭಾಷೆ ಕೊಟ್ಟು
ಮೀನಮೇಷ ಎಣಿಸದೇ ದಾಟಿ ಬಂದಾಗಿತ್ತು!
ಸೂರ್ಯನ ಬೆಂಬತ್ತಿ, ಕತ್ತಲೆಯ ಹಿಂದಟ್ಟಿ
ಹನುಮ ನಾಚುವ ಹಾಗೆ ನಭಕ್ಕೆ ನೆಗೆದಾಗಿತ್ತು!

ಮಗ ಬಂದು ಎದುರು ನಿಂತು,
ಭಯಹುಟ್ಟಿಸುವ ಮುಖವಾಡ ತೊಟ್ಟು
"ಅಪ್ಪ, ಹ್ಯಾಲೋವಿನ್ ವೇಷ" ಎಂದು ಬೊಬ್ಬಿಟ್ಟಾಗ,
ಬಾಯಿ ತೊದಲಿತ್ತು "ಎಲ್ಲಿತ್ತೋ ಈ ಹ್ಯಾಲೋವಿನ್ ವೇಷ?"
ಮನಸು ಬಿಕ್ಕಳಿಸಿತ್ತು "ನಮ್ಮವರಿಗಲ್ಲ ಇದು ನೋಡು",
ಯಾವುದೋ ವೇಷ, ಯಾವುದೋ ದೇಶ,
ಭೂಮಿಸುತ್ತಿ ಬಂದರೂ ಮತ್ತದೇ ಮಾತು.
ಕೋಶ ಓದಿ, ದೇಶ ಸುತ್ತಿದರೂ
ಬೆನ್ನು ಹತ್ತಿ ಬಂದ ಅದೇ ಹಳೆ ವೇಷ!

ಪೇಟೆಂಟು

 ಗೋಕುಲದಲ್ಲೀಗ ಭಾರೀ ಸಡಗರ!
ಕೃಷ್ಣಾಷ್ಟಮಿಯಲ್ಲ,
ಕೃಷ್ಣ-ರಾಧೆಯರ ಪ್ರೇಮದ ವಾರ್ಷಿಕೋತ್ಸವವೂ ಅಲ್ಲ.
ನಂದನ ಮಗನ ಮರಿಮೊಮ್ಮಗ
ಮೊಸರಿಗೆಂದು ಹಾಕಿದ ಪೇಟೆಂಟು ಅಂಟಿಕೊಂಡಿದೆಯಂತೆ.
ಬೆಣ್ಣೆ-ತುಪ್ಪಗಳ ಮಾತಿರಲಿ,
ಮೊಸರಿನ ಹೆಸರಿಗೂ ಕಪ್ಪ ಕೊಡಬೇಕಂತೆ!

ಅದ ಕೇಳಿದ ಗೊಲ್ಲರ ಹಿಂಡು,
ಗೋವುಗಳೆಲ್ಲವ ಕಾಳಿಂದಿಯಲಿ ಬಿಟ್ಟು
ಮರೆತ ಮುರಳಿಯ ಹುಡುಕ ಹೊರಟಿದೆಯಂತೆ,
ದಕ್ಕಿದರೂ ದಕ್ಕೀತು ಅವರಿಗೂ ಸ್ವಲ್ಪ,
ಪಾಪ! ಕಾದು ಕನವರಿಸಿ, ಕನಸಿರಿಸಿ,
ಕುಳಿತಿದ್ದಾರೆ ಮನೆಮಂದಿಯೆಲ್ಲ.

ಇದೆಲ್ಲ ಕೇಳಿದ ನಮ್ಮೂರ ಹೈಕಳೋ!
ಶೂನ್ಯ ಸಂಪಾದನೆಗೋ, ಸಂಶೋಧನೆಗೋ
ಹಾಕಿದರಾಯ್ತೆಂದು ಕಾತರಿಸಿ,
ಮಾರುತ್ತಿದ್ದಾರೆ ಪಾತ್ರೆ-ಪಗಡೆಯನೆಲ್ಲ.